Ayodhya ರಾಮಮಂದಿರಕ್ಕೆ ದೇಣಿಗೆ ಬಂದ ಕೋಟ್ಯಂತರ ಹಣ ಕಾಣೆ: ಅಖಿಲೇಶ್ ಯಾದವ್ ಗಂಭೀರ ಆರೋಪ
ಅಯೋಧ್ಯೆ ರಾಮ ಮಂದಿರದ ದೇಣಿಗೆಯಲ್ಲಿ ಕೋಟ್ಯಂತರ ರೂಪಾಯಿ ಕಾಣೆಯಾಗಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಮತ್ತೊಂದೆಡೆ, ಸ್ವಚ್ಛತೆಯ ಕಾರಣ ನೀಡಿ ಕಾಶಿ ನಗರದೊಳಗಿನ ಎಲ್ಲಾ ಮಾಂಸದಂಗಡಿಗಳನ್ನು ಹೊರಗೆ ಸ್ಥಳಾಂತರಿಸಲು ವಾರಾಣಸಿ ಪಾಲಿಕೆ ನಿರ್ಧರಿಸಿದೆ.
ಟ್ವೀಟ್ ಮಾಡಿರುವ ಅವರು, ‘ರಾಮ ಮಂದಿರಕ್ಕೆ ದೇಣಿಗೆಯಿಂದ ಬಂದ ಕೋಟ್ಯಂತರ ರು.ಗಳು ನಾಪತ್ತೆಯಾಗಿವೆ. ಇದು ಪ್ರಪಂಚದಾದ್ಯಂತದ ಶ್ರೀರಾಮನ ಭಕ್ತರಿಗೆ ಬಹಳ ಸೂಕ್ಷ್ಮ ಸುದ್ದಿಯಾಗಿದೆ. ಇದು ದೇವಾಲಯದ ಟ್ರಸ್ಟ್‌ಗೆ ಅತ್ಯಂತ ನಾಚಿಕೆಗೇಡಿನ ಪರಿಸ್ಥಿತಿ. ಯಾರೂ ಮುಂದೆ ಬಂದು ವಿವರಣೆ ನೀಡಲು ಸಿದ್ಧರಿಲ್ಲ. ಟ್ರಸ್ಟ್ ಮತ್ತು ಸರ್ಕಾರದ ಮೌನ ಶಂಕಾಸ್ಪದವಾಗಿದೆ. ಹೀಗಾಗಿ ಕೋರ್ಟ್ ಇದನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. ಯಾದವ್ ಹೇಳಿಕೆಗೆ ಟ್ರಸ್ಟ್ ಅಥವಾ ಉತ್ತರ ಪ್ರದೇಶ ಸರ್ಕಾರದಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.