Select Location
All Locations
State
Region
City / District
ಡಿ.ಕೆ.ಶಿವಕುಮಾರ್ ಸರ್ಕಾರದ ಮುಂದೆ ದೊಡ್ಡ ಸವಾಲುಗಳಿವೆ: ಸಿ.ಟಿ.ರವಿ ಹೇಳಿದ್ದೇನು?

ಡಿ.ಕೆ.ಶಿವಕುಮಾರ್ ಸರ್ಕಾರದ ಮುಂದೆ ದೊಡ್ಡ ಸವಾಲುಗಳಿವೆ: ಸಿ.ಟಿ.ರವಿ ಹೇಳಿದ್ದೇನು?

ಚಿಕ್ಕಮಗಳೂರು (ಜೂ.05): ಕಳೆದ ಮೂರು ವರ್ಷದ ಅವಧಿಯಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಯಾವುದೇ ಒಳ್ಳೆಯ ಕೆಲಸ ಆಗಿಲ್ಲ. ಮುಂದಿನ ಎರಡು ವರ್ಷವಾದರೂ ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರ ಒಳ್ಳೆಯ ಕೆಲಸ ಮಾಡಲಿ ಎಂಬ ನಿರೀಕ್ಷೆ ಹೊಂದಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ದರಾಮಯ್ಯ ಅವರ ಸರ್ಕಾರ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿತ್ತು. ಬೆಲೆ ಏರಿಕೆ ನಿಯಂತ್ರಣ ಮಾಡುವ ಚಾಲೆಂಜ್ ಡಿ.ಕೆ. ಶಿವಕುಮಾರ್‌ ಸರ್ಕಾರಕ್ಕಿದೆ. ರಾಜ್ಯದಲ್ಲಿ ರೈತರು ಟ್ರಾನ್ಸ್‌ಫಾರ್ಮರ್‌ ಹಾಕಿಸಿಕೊಳ್ಳುವುದಕ್ಕೆ ₹3 ಲಕ್ಷ ದುಡ್ಡು ಕಟ್ಟಬೇಕಾದ ಅನಿವಾರ್ಯತೆ ಇದೆ. ಭ್ರಷ್ಟಾಚಾರ ನಿರೀಕ್ಷೆಗೂ ಮೀರಿ ಬೆಳೆದಿದೆ ಎಂದರು. ಮೂಡ, ವಾಲ್ಮೀಕಿ ಹಗರಣಗಳು ಮಾತ್ರವಲ್ಲ ಎಲ್ಲ ಇಲಾಖೆಗಳಲ್ಲಿಯೂ ಭ್ರಷ್ಟಾಚಾರ ಶೇ. 60ರಷ್ಟು ದಾಟಿದೆ. ಈ ಬಗ್ಗೆ ಗುತ್ತಿಗೆದಾರರ ಸಂಘದವರೇ ಆರೋಪ ಮಾಡುತ್ತಿದ್ದಾರೆ. ಬೆಂಗಳೂರು ಒಳ್ಳೆಯ ಕಾರಣಕ್ಕೆ ಹೆಸರಾಗುವುದಕ್ಕಿಂತ ಹೆಚ್ಚಾಗಿ ಕೆಟ್ಟ ಕಾರಣಕ್ಕೆ ಹೆಸರಾಗುತ್ತಿದೆ. ಗುಂಡಿ ಬಿದ್ದ ರಸ್ತೆಗಳು ಬೆಂಗಳೂರನ್ನು ಬೆತ್ತಲೆಗೊಳಿಸುತ್ತಿವೆ. ಒಂದೇ ಒಂದು ಮಳೆ ಬೆಂಗಳೂರಿನ ನಿಜ ಸ್ವರೂಪ ಬಯಲು ಮಾಡಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಚಾಲೆಂಜ್ ಡಿ.ಕೆ.ಶಿವಕುಮಾರ್ ಅವರ ಮೇಲಿದೆ ಎಂದರು.

ರಾಜ್ಯದಲ್ಲಿ ಸಮಸ್ಯೆಗಳು ಹೆಚ್ಚಿರುವಾಗ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಷ್ಟು ಘೋಷಣೆಗಳನ್ನು ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನಾವು ಸ್ವಾಗತಿಸುತ್ತೇವೆ. ಆದರೆ ಗ್ರಾಮಾಂತರ ಪ್ರದೇಶಗಳಿಗೆ ಬಸ್ ಗಳೇ ಕಡಿತವಾಗಿವೆ. ಇರುವ ಬಸ್ ಗಳು ತಳ್ಳೋ ಮಾಡಲ್ ಗಳಾಗಿವೆ. ಸರ್ಕಾರಿ ಬಸ್ಸುಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಹೊಸ ಬಸ್‌ಗಳ ಖರೀದಿ ನಡೆದಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿಶತ 30- 40 ರಷ್ಟು ಹಾಲಿ ಇದ್ದ ರೂಟ್ ಗಳನ್ನು ಕಡಿತಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ವರ್ಷ ರಾಜ್ಯದ ಸಾಲ ₹1.25 ಲಕ್ಷ ಕೋಟಿಯಿಂದ ₹1.30 ಲಕ್ಷ ಕೋಟಿ ವರೆಗೂ ಏರಿಕೆಯಾಗುತ್ತಿದೆ. ಹೀಗಿರುವಾಗ ನೀರಾವರಿ ಯೋಜನೆ ಯಾವಾಗ ಮುಗಿಸುತ್ತೀರಿ ಹಾಗೂ ಉದ್ಯೋಗ ಸೃಷ್ಟಿ ಎಲ್ಲಿ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಈ ಎಲ್ಲಾ ಸವಾಲುಗಳ ನಡುವೆ ಡಿ.ಕೆ.ಶಿವಕುಮಾರ್ ತಮ್ಮ ಹಳೆಯ ಅನುಭವದ ಜೊತೆಗೆ ಹೊಸ ಹುಮ್ಮಸ್ಸಿನೊಂದಿಗೆ ಕೆಲಸ ಮಾಡುವಂತಾಗಬೇಕು. ಒಳ್ಳೆಯ ಕೆಲಸ ಮಾಡಲಿ ಎಂದು ನಾವು ನಿರೀಕ್ಷೆ ಮಾಡುತ್ತೇವೆ. ಒಳ್ಳೆಯ ಕೆಲಸಕ್ಕೆ ನಾವು ಬೆಂಬಲ ನೀಡುತ್ತೇವೆ. ವಿರೋಧ ಮಾಡಬೇಕು ಎಂಬ ಕಾರಣಕ್ಕಾಗಿಯೇ ಯಾವುದನ್ನು ವಿರೋಧ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನೂತನ ಮುಖ್ಯಮಂತ್ರಿ ಮತ ಬ್ಯಾಂಕಿನ ರಕ್ಷಣೆಗೆ ರಾಜ್ಯದ ಹಿತ ಮುಖ್ಯ ಎನ್ನುವುದನ್ನು ಗಮನ ದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಶಕ್ತಿ ಯೋಜನೆ ಒಳ್ಳೆಯದೇ. ಆದರೆ ಇದರಿಂದ ಕೆಎಸ್ಆರ್ಟಿಸಿಗೆ ನಿಶಕ್ತಿ ಬಂದಿದೆ. ರೂಟ್‌ಗಳಲ್ಲಿ ಬಸ್ಸೇ ಬರುವುದಿಲ್ಲ ಎಂದರೆ ಉಚಿತ ಪಾಸ್ ನೀಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.

Source : Asianet News

2 hours ago

Home Flash News