ಶಾಸಕರ ನಂತರ ಇದೀಗ 23 ಟಿಎಂಸಿ ಸಂಸದರು ಬಂಡಾಯ: ಮಮತಾಗೆ ಹೆಚ್ಚಿದ ಸಂಕಷ್ಟ
ನವದೆಹಲಿ: ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಹಲವು ಶಾಸಕರು ಪಕ್ಷದೊಳಗೆ ಬಂಡಾಯ ಎದ್ದಿರುವ ಬೆನ್ನಲ್ಲೇ ಇದೀಗ 20ರಿಂದ 23 ಸಂಸದರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಕೂಡ ಪಕ್ಷಾಂತರ ಮಾಡಲು ಯೋಚನೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಟಿಎಂಸಿಯ 28 ಸಂಸದರು ಲೋಕಸಭೆಯಲ್ಲಿ ಮತ್ತು 13 ಸಂಸದರು ರಾಜ್ಯಸಭೆಯಲ್ಲಿದ್ದಾರೆ. ಲೋಕಸಭೆಯ ವಿರೋಧ ಪಕ್ಷಗಳ ಪಾಳಯದಲ್ಲಿ ಟಿಎಂಸಿಯು ಎರಡನೇ ಅತಿದೊಡ್ಡ ಪಕ್ಷವಾಗಿದೆ. ಒಂದು ವೇಳೆ ಸಂಸದರು ಕೂಡ ಪಕ್ಷಾಂತರ ಮಾಡಿದರೆ, ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಶಾಸಕರ ಬಂಡಾಯ ಎದುರಿಸುತ್ತಿರುವ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಆಘಾತ ಎದುರಾಗಲಿದೆ ಎಂದು ಮೂಲಗಳು ಹೇಳಿವೆ. ಬಂಗಾಳದ ಟಿಎಂಸಿ ಶಾಸಕಾಂಗ ಪಕ್ಷವು ಈಗಾಗಲೇ ಇಬ್ಭಾಗವಾಗಿದ್ದು, ರುತಬ್ರತಾ ಬ್ಯಾನರ್ಜಿ ನೇತೃತ್ವದ 60 ಬಂಡಾಯ ಶಾಸಕರ ಗುಂಪು ತಾವು ‘ನಿಜವಾದ ಟಿಎಂಸಿ’ ಎಂದು ಹೇಳಿಕೊಂಡಿತ್ತು.