IMD: ಇಂದಿನಿಂದ 7 ದಿನದವರೆಗೆ ಬಿರುಗಾಳಿ ಸಹಿತ ಗುಡುಗು ಮಳೆ, 19 ಜಿಲ್ಲೆಗಳಿಗೆ ಹವಾಮಾನ ಇಲಾಖೆಯ ಎಚ್ಚರಿಕೆ!
ಬೆಂಗಳೂರು: ರಾಜ್ಯದ ಜನತೆ ಎಚ್ಚೆತ್ತುಕೊಳ್ಳಬೇಕಾದ ಸಮಯವಿದು. ಈಗಾಗಲೇ ಕರುನಾಡು ಬೆಂಕಿಯ ನಿಗಿ ನಿಗಿ ಕೆಂಡ ಹಾದ ಬಾಣಲೆಯಲ್ಲಿ ಬೇಯ್ದ ಹಾಗಿನ ಬಿಸಿಲನ್ನು (Summer) ನೋಡಿದೆ. ಇನ್ನು ಮುಂಗಾರು ತಡ, ಮಳೆ ಕಮ್ಮಿ ಅನ್ನೋ ವರದಿಗಳೂ ಕೂಡ ರೈತರ ದಿಗಿಲು ಹೆಚ್ಚು ಮಾಡುತ್ತಿವೆ. ಇಷ್ಟರ ನಡುವೆ ಕರ್ನಾಟಕದ (Karnataka) ಮೂರೂ ಪ್ರಮುಖ ಹವಾಮಾನ ವಿಭಾಗಗಳಲ್ಲಿ ಜೂನ್ 5 ರಿಂದ ಜೂನ್ 11 ರವರೆಗೆ ಮುಂದಿನ ಏಳು ದಿನಗಳ (One Week) ಕಾಲ ತೀವ್ರ ಸ್ವರೂಪದ ಮಳೆ, ಗುಡುಗು-ಮಿಂಚು ಮತ್ತು ಬಿರುಗಾಳಿಯ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಅಧಿಕೃತ ಎಚ್ಚರಿಕೆ ನೀಡಿದೆ. ಮುಂದಿನ 2-3 ದಿನಗಳಲ್ಲಿ ನೈರುತ್ಯ ಮುಂಗಾರು (South-Western Monsoon) ರಾಜ್ಯದ ಇನ್ನಷ್ಟು ಭಾಗಗಳಿಗೆ ಪ್ರವೇಶಿಸಲು ವಾತಾವರಣ ಸಂಪೂರ್ಣ ಅನುಕೂಲಕರವಾಗಿದ್ದು, ಈ ಬಾರಿ ಮುಂಗಾರು ಸಾಮಾನ್ಯಕ್ಕಿಂತ ರಭಸವಾಗಿ ಅಪ್ಪಳಿಸಲಿದೆ ಎಂಬ ಭೀತಿ ಮನೆ ಮಾಡಿದೆ.
ಕರಾವಳಿ ಕರ್ನಾಟಕದಲ್ಲಿ ಅತ್ಯಂತ ತೀವ್ರವಾದ ಮಳೆಯ ಎಚ್ಚರಿಕೆ ನೀಡಲಾಗಿದ್ದು, ಜೂನ್ 5 ರಿಂದ ಜೂನ್ 8 ರವರೆಗೆ ಸತತ ನಾಲ್ಕು ದಿನಗಳ ಕಾಲ ಅತಿ ಭಾರಿ ಮಳೆ (Very Heavy Rain) ಗುಡುಗು, ಮಿಂಚು ಮತ್ತು ಬಿರುಗಾಳಿಯ ಜೊತೆ ಅಪ್ಪಳಿಸಲಿದೆ. ಜೂನ್ 9 ರಿಂದ 11 ರವರೆಗೆ ಬಿರುಗಾಳಿ ತಗ್ಗಿದರೂ ಅತಿ ಭಾರಿ ಮಳೆ ಮಾತ್ರ ಮುಂದುವರೆಯಲಿದೆ. ಕರಾವಳಿ ಭಾಗದಲ್ಲಿ ಜೂನ್ 5 ರಿಂದ 10 ರವರೆಗೆ ಮಳೆಯ ಪ್ರಮಾಣ ಗಣನೀಯವಾಗಿ ಹೆಚ್ಚಾಗಲಿದ್ದು, ಕೆಲವು ಕಡೆ ದಿಢೀರ್ ಪ್ರವಾಹ (Flash Floods) ಉಂಟಾಗಬಹುದು ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲಬಹುದು ಎಂದು ಇಲಾಖೆ ಎಚ್ಚರಿಸಿದೆ.