Himachal Zila Parishad Polls: 251 ಸ್ಥಾನಗಳ ಪೈಕಿ 190ರಲ್ಲಿ ಬಿಜೆಪಿ ಭರ್ಜರಿ ಜಯ!
ಶಿಮ್ಲಾ: ಹಿಮಾಚಲ ಪ್ರದೇಶದ ನಾಲ್ಕು ಮಹಾನಗರ ಪಾಲಿಕೆಗಳ ಪೈಕಿ ಮೂರರಲ್ಲಿ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ, ಆಡಳಿತರೂಢ ಕಾಂಗ್ರೆಸ್‌ಗೆ ತೀವ್ರ ಮುಖಭಂಗ ಉಂಟುಮಾಡಿರುವ ಬಿಜೆಪಿ ಈಗ ಜಿಲ್ಲಾ ಪರಿಷತ್ ಚುನಾವಣೆಯಲ್ಲೂ ಸಾರ್ವತ್ರಿಕ ವಿಜಯದ ಪತಾಕೆ ಹಾರಿಸಿದೆ. ರಾಜ್ಯದ ಒಟ್ಟು 251 ಜಿಲ್ಲಾ ಪರಿಷತ್ ಸ್ಥಾನಗಳ ಪೈಕಿ 190ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಕಟಿಸಿದೆ. ಸಿಎಂ ಸುಖು ತವರು ಜಿಲ್ಲೆಯಲ್ಲೇ ಕಾಂಗ್ರೆಸ್‌ಗೆ ಆಘಾತ ಬಿಜೆಪಿ ರಾಜ್ಯ ಮಾಧ್ಯಮ ಸಂಚಾಲಕ ಕರಣ್ ನಂದಾ ಹೇಳಿಕೆ ಬಿಡುಗಡೆ ಮಾಡಿದ್ದು, "ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ತವರು ಜಿಲ್ಲೆಯಾದ ಹಮೀರಪುರದಲ್ಲೂ ಕಾಂಗ್ರೆಸ್ ಹೀನಾಯವಾಗಿ ಸೋತಿದೆ ಎಂದು ಲೇವಡಿ ಮಾಡಿದ್ದಾರೆ.
ಈಗಾಗಲೇ ನಡೆದಿದ್ದ ಮಂಡಿ, ಸೋಲನ್ ಮತ್ತು ಧರ್ಮಶಾಲಾ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು, ಕಾಂಗ್ರೆಸ್ ಕೇವಲ ಪಾಲಂಪುರ ಮಹಾನಗರ ಪಾಲಿಕೆಯನ್ನು ಮಾತ್ರ ಉಳಿಸಿಕೊಳ್ಳಲು ಯಶಸ್ವಿಯಾಗಿದೆ. ಮಹಾನಗರ ಪಾಲಿಕೆ ಚುನಾವಣೆಗಳು ಪಕ್ಷದ ಚಿಹ್ನೆಯಡಿ ನಡೆದಿದ್ದರೆ, ಉಳಿದ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯತ್ ಚುನಾವಣೆಗಳು ಪಕ್ಷದ ಅಧಿಕೃತ ಚಿಹ್ನೆ ಇಲ್ಲದೆ ನಡೆದಿದ್ದವು. ಸೋಮವಾರ ಸಂಜೆಯ ವೇಳೆಗೆ ಜಿಲ್ಲಾ ಪರಿಷತ್‌ನ ಸಂಪೂರ್ಣ ಮತ್ತು ಅಧಿಕೃತ ಫಲಿತಾಂಶ ಪ್ರಕಟವಾಗಬೇಕಿತ್ತಾದರೂ, ಅಷ್ಟರಲ್ಲೇ ಬಿಜೆಪಿ ಬಹುತೇಕ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ತಿರುಚಿ ಬೆಣ್ಣೆ ಸವರುತ್ತಿದೆ ಬಿಜೆಪಿ: ಕಾಂಗ್ರೆಸ್ ತಿರುಗೇಟು ಬಿಜೆಪಿಯ ಈ ಸರಣಿ ವಾದಗಳನ್ನು ತಳ್ಳಿಹಾಕಿರುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ವಿನಯ್ ಕುಮಾರ್, "ನಮ್ಮ ಬೆಂಬಲಿತ ಅಭ್ಯರ್ಥಿಗಳು ಪಂಚಾಯತ್ ಮಟ್ಟದಲ್ಲಿ ಐತಿಹಾಸಿಕ ಯಶಸ್ಸು ಸಾಧಿಸಿದ್ದಾರೆ. ಬಿಜೆಪಿ ಸುಳ್ಳು ಮಾಹಿತಿ ನೀಡಿ ಜನರನ್ನು ಹಾದಿ ತಪ್ಪಿಸುತ್ತಿದೆ," ಎಂದು ಆಕ್ರೋಶ ಹೊರಹಾಕಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಮೇ 17 ರಂದು ನಗರಸಭೆ ಮತ್ತು ನಗರ ಪಂಚಾಯತ್‌ಗಳಿಗೆ ಚುನಾವಣೆ ನಡೆದಿತ್ತು. ತದನಂತರ ಮೇ 26, 28 ಮತ್ತು 30 ರಂದು ಮೂರು ಹಂತಗಳಲ್ಲಿ ಗ್ರಾಮ ಪಂಚಾಯತ್ ಪ್ರಧಾನ್, ಉಪಪ್ರಧಾನ್, ಪಂಚಾಯತ್ ಸಮಿತಿ ಹಾಗೂ ಜಿಲ್ಲಾ ಪರಿಷತ್ ಸದಸ್ಯರ ಸ್ಥಾನಗಳಿಗೆ ಮತದಾನ ನಡೆದಿತ್ತು. ಕಾಂಗ್ರೆಸ್‌ನ ಸುಳ್ಳಿನ ಕೊಡ ತುಂಬಿದೆ: ಜೈ ರಾಮ್ ಠಾಕೂರ್ "ಸ್ಥಳೀಯ ಸಂಸ್ಥೆ ಹಾಗೂ ಪಂಚಾಯತ್ ಚುನಾವಣೆಯ ಫಲಿತಾಂಶ ಏನಾಗಲಿದೆ ಎಂಬುದು ಮುಖ್ಯಮಂತ್ರಿಗಳಿಗೆ ಮೊದಲೇ ಗೊತ್ತಿತ್ತು. ಇದೇ ಕಾರಣಕ್ಕೆ ಅವರು ಚುನಾವಣೆ ಮುಂದೂಡಲು ಯತ್ನಿಸುತ್ತಿದ್ದರು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಇಡೀ ಸಚಿವ ಸಂಪುಟದ ನಾಯಕರನ್ನು ಅವರದೇ ಸ್ವಕ್ಷೇತ್ರ ಹಾಗೂ ಪಂಚಾಯತ್‌ಗಳ ಜನ ತಿರಸ್ಕರಿಸಿದ್ದಾರೆ. ಕಾಂಗ್ರೆಸ್‌ನ ಸುಳ್ಳಿನ ಗ್ಯಾರಂಟಿಗಳನ್ನು ಜನ ನಂಬುತ್ತಿಲ್ಲ. ಶೀಘ್ರದಲ್ಲೇ ಆ ಪಕ್ಷ ರಾಜ್ಯದಿಂದ ಧೂಳೀಪಟವಾಗಲಿದೆ." -ಜೈ ರಾಮ್ ಠಾಕೂರ್, ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ