ಸಚಿವ ಸಂಪುಟ: ದೆಹಲಿಯಲ್ಲಿ ಕಸರತ್ತು, 40ಕ್ಕೂ ಹೆಚ್ಚು ಶಾಸಕರಿಂದ ಲಾಬಿ
ನವದೆಹಲಿ: ಸಚಿವ ಸ್ಥಾನ ಪಡೆಯಲು ಕಾಂಗ್ರೆಸ್‌ನ 40ಕ್ಕೂ ಹೆಚ್ಚು ಹಿರಿಯ ಹಾಗೂ ಕಿರಿಯ ಶಾಸಕರು ಹೈಕಮಾಂಡ್ ಅಂಗಳದಲ್ಲಿ ಭಾರಿ ಲಾಬಿ ನಡೆಸುತ್ತಿರುವುದರಿಂದ ಕರ್ನಾಟಕದ ನೂತನ ಸಚಿವ ಸಂಪುಟ ರಚನೆ ಕಗ್ಗಂಟಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಲೋಕಭವನದಲ್ಲಿ ಬುಧವಾರ (ಜೂನ್ 3) ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರ ಜೊತೆಗೆ, ಮೊದಲ ಹಂತದಲ್ಲಿ 8ರಿಂದ 10 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಮುಗಿದ ಬಳಿಕ ಮತ್ತೊಂದಷ್ಟು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಸಚಿವರ ಪಟ್ಟಿ ಅಂತಿಮಗೊಳಿಸಲು ಹಾಗೂ ರಾಜ್ಯಸಭಾ ಮತ್ತು ಪರಿಷತ್ ಅಭ್ಯರ್ಥಿಗಳ ಪಟ್ಟಿ ಆಖೈರುಗೊಳಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಭಾಗಿಯಾಗಿ ಪಟ್ಟಿಗೆ ಅಂತಿಮ ರೂಪ ನೀಡುವ ಕಸರತ್ತು ನಡೆಸಲಿದ್ದಾರೆ. ವೇಣುಗೋಪಾಲ್ ಮನೆಗೆ ಸೋಮವಾರ ತೆರಳಿದ ಸುರ್ಜೇವಾಲಾ ಅವರ ಜತೆ ಚರ್ಚೆ ನಡೆಸಿದ್ದಾರೆ. ಬಳಿಕ ವೇಣುಗೋಪಾಲ್ ಅವರ ಮನೆಗೆ ತೆರಳಿದ ಸಿದ್ದರಾಮಯ್ಯ, ಸಂಪುಟ ಸೇರಿಸಲು ಬಯಸುವ ತಮ್ಮ ಆಪ್ತರ ಪಟ್ಟಿಯನ್ನು ನೀಡಿದ್ದಾರೆ. ಅಲ್ಲದೆ, ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ. ಬಳಿಕ, ಶಿವಕುಮಾರ್ ಅವರ ಜತೆಯೂ ವೇಣುಗೋಪಾಲ್ ಚರ್ಚೆ ನಡೆಸಿದರು.