ಜೆಡಿಎಸ್ ಅನ್ನು ಹಂತ ಹಂತವಾಗಿ ಮುಗಿಸುತ್ತಿರುವ ಬಿಜೆಪಿ: ಶಾಸಕ ಬಾಲಕೃಷ್ಣ
ಬಿಡದಿ (ರಾಮನಗರ): ‘ಆರು ವರ್ಷಗಳ ಹಿಂದೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ರಾಜ್ಯಸಭೆ ಪ್ರವೇಶ ಬಯಸಿದ್ದಾಗ, ಅಂತಹ ನಾಯಕರಿಗೆ ಗೌರವಯುತವಾಗಿ ಅವಕಾಶ ಮಾಡಿಕೊಡಬೇಕು ಎಂದು ಸ್ವತಃ ಸೋನಿಯಾ ಗಾಂಧಿ ಅವರೇ ರಾಜ್ಯದ ಕೆಪಿಸಿಸಿ ಅಧ್ಯಕ್ಷರಿಗೆ ಕರೆ ಮಾಡಿದ್ದರು. ಅವರಿಗೊಂದು ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದ್ದರು. ಇದು ದೇವೇಗೌಡರ ಮೇಲೆ ಕಾಂಗ್ರೆಸ್ ನಾಯಕರು ಹೊಂದಿರುವ ಗೌರವಕ್ಕೆ ಅದು ಸಾಕ್ಷಿಯಾಗಿತ್ತು’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ರಾಜ್ಯಸಭೆ ಪ್ರವೇಶಕ್ಕೆ ದೇವೇಗೌಡರಿಗೆ ಬಿಜೆಪಿ ಅವಕಾಶ ನೀಡದಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಬಿಡದಿಯಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯವರು ಜೆಡಿಎಸ್ ಅನ್ನು ಹಂತ ಹಂತವಾಗಿ ಮುಗಿಸುತ್ತಿದ್ದಾರೆ. ಬಿಜೆಪಿಯವರು ಕರೆಯದಿದ್ದರೂ ಜೆಡಿಎಸ್‌ನವರೇ ಅವರ ಮೈಮೇಲೆ ಬಿದ್ದು ಎನ್‌ಡಿಎ ಮೈತ್ರಿಕೂಟ ಸೇರಿಕೊಂಡಿದ್ದಕ್ಕೆ ಈ ಸಮಸ್ಯೆಯಾಗಿದೆ. ದೇವೇಗೌಡರನ್ನು ರಾಜ್ಯಸಭೆಗೆ ಕಳಿಸದೆ ಅನ್ಯಾಯ ಮಾಡಿದ್ದಾರೆ’ ಎಂದರು.
‘ಬೆಂಗಳೂರಿನವರೇ ಆದ ರಾಮಲಿಂಗಾ ರೆಡ್ಡಿ ಅವರು ಬೇರೆ ಜಿಲ್ಲೆಗೆ ಓಡಾಡುವುದಕ್ಕೆ ಕಷ್ಟವಾಗುತ್ತದೆ. ಹಾಗಾಗಿ, ಬೆಂಗಳೂರು ಖಾತೆ ಕೊಡಿ ಎಂದು ಕೇಳಿದ್ದರು. ಕಡೆಗೆ ಮುಖ್ಯಮಂತ್ರಿ ಹಾಗೂ ರಾಜ್ಯ ಉಸ್ತುವಾರಿ ಹೈಕಮಾಂಡ್ ಅವರ ಜೊತೆ ಮಾತನಾಡಿ ಬಗೆಹರಿಸಿದ್ದಾರೆ. ಕಡೆಗೆ ರಾಮಲಿಂಗಾ ರೆಡ್ಡಿ ಸಹ ತಮಗೆ ಕೊಟ್ಟ ಖಾತೆ ಒಪ್ಪಿದ್ದಾರೆ. ನಮ್ಮಲ್ಲಿ ಖಾತೆ ವಿಷಯದಲ್ಲಿ ಗೊಂದಲವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.