ಇಸ್ರೇಲ್ ನಡೆಸಿದ ವೈಮಾನಿಕ ದಾಳಿ: ಇಬ್ಬರು ಸೈನಿಕರ ಸಾವು ಅಧಿಕೃತವಾಗಿ ಒಪ್ಪಿಕೊಂಡ ಇರಾನ್!
ದುಬೈ: ಮಧ್ಯಪ್ರಾಚ್ಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಇಸ್ರೇಲ್ ಸೈನ್ಯವು ಇರಾನ್ ಮೇಲೆ ಸೋಮವಾರ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ತನ್ನ ವಾಯು ರಕ್ಷಣಾ ಪಡೆಯ ಕನಿಷ್ಠ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ದೂರದರ್ಶನವು ಮಂಗಳವಾರ ಅಧಿಕೃತವಾಗಿ ವರದಿ ಮಾಡಿದೆ. ಇಸ್ರೇಲ್ ನಡೆಸಿದ ಈ ದಿಢೀರ್ ದಾಳಿಯಿಂದಾಗಿ ಉಭಯ ದೇಶಗಳ ನಡುವೆ ಏರ್ಪಟ್ಟಿದ್ದ ಕದನ ವಿರಾಮಕ್ಕೆ ಭಾರಿ ಹಿನ್ನಡೆಯಾಗಿದ್ದು, ಇಡೀ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಭೀತಿ ಆವರಿಸಿದೆ. ಸಾವನ್ನು ಮೊದಲ ಬಾರಿಗೆ ಒಪ್ಪಿಕೊಂಡ ಇರಾನ್! ಇಸ್ರೇಲ್ ದಾಳಿ ನಡೆಸಿದ ನಂತರ ಇರಾನ್ ತನ್ನ ಸೈನಿಕರ ಸಾವು-ನೋವುಗಳ ಬಗ್ಗೆ ಇಷ್ಟು ದಿನ ಮೌನವಾಗಿತ್ತು. ಆದರೆ ಮಂಗಳವಾರ ಬಿಡುಗಡೆ ಮಾಡಲಾದ ಅಧಿಕೃತ ಹೇಳಿಕೆಯಲ್ಲಿ, ಮೃತರನ್ನು ಬಹ್ಮನ್ ಹೊಸೇನಿ ಮತ್ತು ಅಲಿ ರೆಜಾ ಅಬಿರಿ ಎಂದು ಗುರುತಿಸಲಾಗಿದೆ. ಆದರೆ ಈ ಇಬ್ಬರು ಸೈನಿಕರ ಸೇನಾ ಶ್ರೇಣಿ ಏನು ಎಂಬುದನ್ನು ಇರಾನ್ ಮಾಧ್ಯಮಗಳು ಬಹಿರಂಗಪಡಿಸಿಲ್ಲ.