ವಿದೇಶಿ ಮಹಿಳೆ ಮೇಲೆ ಅತ್ಯಾಚಾರವಾಗಿದ್ದರೆ ಅದು ಬಹಳ ಗಂಭೀರ ವಿಷಯ: ಕರ್ನಾಟಕ ಹೈಕೋರ್ಟ್
ಕೊಡಗಿನ ಹೋಂಸ್ಟೇಯೊಂದರಲ್ಲಿ ಅಮೆರಿಕ ಮಹಿಳೆ ಮೇಲೆ ಅತ್ಯಾಚಾರ ಆರೋಪ ಅತ್ಯಂತ ಗಂಭೀರ ವಿಷಯ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಈ ಸಂಬಂಧ ತನಿಖಾ ದಾಖಲೆಗಳನ್ನು ಸಲ್ಲಿಸುವಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದ್ದು, ಇದು ತಕ್ಷಣವೇ ಸಂಪೂರ್ಣ ತಡೆಯಾಜ್ಞೆ ನೀಡಬಹುದಾದ ಪ್ರಕರಣವಲ್ಲ. ತನಿಖಾ ದಾಖಲೆಗಳನ್ನು ಪರಿಶೀಲಿಸಬೇಕಿದೆ ಎಂದೂ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ವಿದೇಶಿ ಮಹಿಳೆಯ ಮೇಲೆ ಭಾರತದಲ್ಲಿ ಅತ್ಯಾಚಾರ ನಡೆದಿರುವ ಆರೋಪ ಅತ್ಯಂತ ಗಂಭೀರ ವಿಷಯ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಕೊಡಗಿನ ಕುಟ್ಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂಸ್ಟೇ ಮಾಲೀಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ. ಏಪ್ರಿಲ್ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ, ಮಾದಕ ವಸ್ತು ನೀಡಿ ಪ್ರಜ್ಞೆ ತಪ್ಪಿಸಿ ಹೋಂಸ್ಟೇಯಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು 33 ವರ್ಷದ ಅಮೆರಿಕ ಮೂಲದ ಮಹಿಳೆ ಆರೋಪಿಸಿದ್ದರು. ಈ ಸಂಬಂಧ ಹೋಂಸ್ಟೇ ಮಾಲೀಕ ವಿಶಾಲ್ ಪೊನ್ನಣ್ಣ ಹಾಗೂ ಕೆಲಸಗಾರ ಬ್ರಿಜೇಶ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಇದು ಗಂಭೀರ ಪ್ರಕರಣವಾಗಿರುವ ಹಿನ್ನೆಲೆ ತನಿಖಾ ದಾಖಲೆಗಳನ್ನು ಬುಧವಾರದೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.
ಆರೋಪಿಸಲಾದ ಅಪರಾಧಗಳು ಜಾಮೀನು ದೊರೆಯುವ ಸ್ವರೂಪದವು ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಅಲ್ಲದೆ, ಎಫ್‌ಐಆರ್ ದಾಖಲಾಗುವ ಮೊದಲು ತಮ್ಮ ಕಕ್ಷಿದಾರರಿಗೆ ಯಾವುದೇ ಆರೋಪದ ಕುರಿತು ಮಾಹಿತಿ ನೀಡಲಾಗಿರಲಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು. ದೂರುದಾರರು ಏಪ್ರಿಲ್ 12ರಂದು ಆರೋಪಿಯನ್ನು ಹೋಂಸ್ಟೇ ಸಿಬ್ಬಂದಿ ಎಂದು ಗುರುತಿಸಿದ್ದರೇ ಹೊರತು, ಅರ್ಜಿದಾರರನ್ನು ಆರೋಪಿಸಿರಲಿಲ್ಲ. ಹೀಗಾಗಿ ಏಪ್ರಿಲ್ 19ರಿಂದ ಮೇ 2ರವರೆಗೆ ಕಕ್ಷಿದಾರರ ಬಂಧನ ಕಾನೂನುಬಾಹಿರವಾಗಿದ್ದು, ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದರು. ಹೀಗಾಗಿ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿದ್ದರು.