ನೀಟ್ ಪ್ರಶ್ನೆ ಪತ್ರಿಕೆ ವಾಯುಪಡೆಯ ಮಿ-17ನಲ್ಲಿ ರವಾನೆ, ಪೇಪರ್ ತಯಾರಿಸಿದವರಿಗೆ ಜೂನ್21ರವರೆಗೆ ಗೃಹಬಂಧನ!
ನವದೆಹಲಿ: ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್-ಯುಜಿ (NEET-UG 2026) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬೆನ್ನಲ್ಲೇ, ಮುಂಬರುವ ಜೂನ್ 21ರ ಮರುಪರೀಕ್ಷೆಯನ್ನು ಅತ್ಯಂತ ಪಾರದರ್ಶಕ ಹಾಗೂ ಲೋಪದೋಷರಹಿತವಾಗಿ ನಡೆಸಲು ಕೇಂದ್ರ ಸರ್ಕಾರ ಅಭೂತಪೂರ್ವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಪರೀಕ್ಷಾ ವ್ಯವಸ್ಥೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಪ್ರಶ್ನೆಪತ್ರಿಕೆಗಳ ಸುರಕ್ಷಿತ ಸಾಗಣೆಗಾಗಿ ಭಾರತೀಯ ವಾಯುಪಡೆಯ (IAF) ಅತ್ಯಾಧುನಿಕ ಮಿ-17 ಹೆಲಿಕಾಪ್ಟರ್‌ಗಳು ಸೇರಿದಂತೆ ಸೇನಾ ಭದ್ರತೆಯನ್ನು ಬಳಸಿಕೊಳ್ಳಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ನಿರ್ಧಾರ ಕೈಗೊಂಡಿದೆ.
ಇತಿಹಾಸದಲ್ಲೇ ಮೊದಲ ಪ್ರಯೋಗ: ವಾಯುಪಡೆಯ ‘ಮಿ-17’ ಕಾವಲು! ಇತ್ತೀಚಿನ ಪೇಪರ್ ಲೀಕ್ ಹಗರಣದಿಂದಾಗಿ ದೇಶದ ಪರೀಕ್ಷಾ ವ್ಯವಸ್ಥೆಯ ಮೇಲೆಯೇ ವಿದ್ಯಾರ್ಥಿಗಳು ಮತ್ತು ಪೋಷಕರು ಕಳೆದುಕೊಂಡಿರುವ ವಿಶ್ವಾಸವನ್ನು ಮರಳಿ ಗಳಿಸುವುದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಈಗ ಪ್ರತಿಷ್ಠೆಯ ಸವಾಲಾಗಿದೆ. ಈ ಕುರಿತು ಮಾಹಿತಿ ನೀಡಿರುವ NTA ಮಹಾನಿರ್ದೇಶಕ ಅಭಿಷೇಕ್ ಸಿಂಗ್, ಜೂನ್ 21ರಂದು ನಡೆಯಲಿರುವ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ನಿಗದಿತ ಕೇಂದ್ರಗಳಿಗೆ ಅತ್ಯಂತ ಸುರಕ್ಷಿತವಾಗಿ ತಲುಪಿಸಲು ಭಾರತೀಯ ವಾಯುಪಡೆಯ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳ ನೆರವು ಪಡೆಯಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ರಕ್ಷಣಾ ಇಲಾಖೆಯ ಉನ್ನತ ಮೂಲಗಳ ಪ್ರಕಾರ, ದೇಶದ ಅತ್ಯಂತ ಆಯಕಟ್ಟಿನ 18 ಪ್ರಮುಖ ಸ್ಥಳಗಳಿಂದ ಪ್ರಶ್ನೆಪತ್ರಿಕೆಗಳ ಪ್ಯಾಕೆಟ್‌ಗಳನ್ನು ವಾಯುಪಡೆಯ ಮಿ-17 ಹೆಲಿಕಾಪ್ಟರ್‌ಗಳ ಮೂಲಕ ವಿವಿಧ ವಿತರಣಾ ಕೇಂದ್ರಗಳಿಗೆ ರವಾನಿಸಲಾಗುತ್ತದೆ. ಕೇವಲ ವೈಮಾನಿಕ ಸಾಗಣೆ ಅಷ್ಟೇ ಅಲ್ಲದೆ, ಹೆಲಿಕಾಪ್ಟರ್‌ನಿಂದ ಇಳಿಸಿದ ನಂತರ ಪ್ರತಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವವರೆಗಿನ ಪ್ರತಿಯೊಂದು ಹಂತದಲ್ಲೂ ಸಶಸ್ತ್ರ ಸೇನಾ ಪಡೆಯ ಕಠಿಣ ಕಾವಲು ಇರಲಿದೆ.