ಡಿಕೆಶಿ ಸರ್ಕಾರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ; ಜಮೀರ್ ಪರ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜು!
ಹೊಸಪೇಟೆ/ಶಿವಮೊಗ್ಗ: ಮಾಜಿ ಸಚಿವ, ಮುಸ್ಲಿಂ ಸಮುದಾಯದ ಮುಖಂಡ, ಶಾಸಕ ಜಮೀರ್ ಅಹಮದ್(Zameer ahmed khan) ಅವರಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಹಾಗೂ ಉಪಮುಖ್ಯಮಂತ್ರಿ(DCM) ಹುದ್ದೆ ನೀಡುವಂತೆ ಆಗ್ರಹಿಸಿ ಹೊಸಪೇಟೆ ಹಾಗೂ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಹೊಸಪೇಟೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಇದೇ ವೇಳೆ, ಶಿರಾಳಕೊಪ್ಪದಲ್ಲಿ ಜಮೀರ್ ಅಹಮದ್ ಅಭಿಮಾನಿ ಬಳಗದಿಂದ ಪ್ರತಿಭಟನೆ ನಡೆಯಿತು. ಶಿರಾಳಕೊಪ್ಪದ ಬಸ್ ನಿಲ್ದಾಣದ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ಜಮೀರ್‌ಗೆ ಸಚಿವ ಸ್ಥಾನ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರು ರೈತರ ಅನೇಕ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೈಕ್ ಮತ್ತು ಅವರ ವಿದ್ಯಾಭ್ಯಾಸಕ್ಕೆ ಖರ್ಚು ವೆಚ್ಚ ನೀಡಿದ್ದಾರೆ. ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ನಂತರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.